ದಕ್ಷಿಣ ಡಕೋಟ -
ಅಮೆರಿಕ ಸಂಯುಕ್ತ ಸಂಸ್ಥಾನಗಳ  ಉತ್ತರ - ಮಧ್ಯ ರಾಜ್ಯಗಳಲ್ಲಿ ಒಂದು.  ಉತ್ತರದಲ್ಲಿ ಡಕೋಟ, ಪೂರ್ವದಲ್ಲಿ ಮಿನ್ನ ಸೋಟ ಮತ್ತು ಐಯವ, ದಕ್ಷಿಣದಲ್ಲಿ  ನಬ್ರ್ಯಾಸ್ಕ, ಮತ್ತು ಪಶ್ಚಿಮದಲ್ಲಿ ವೈಯೋಮಿಂಗ್ ಮತ್ತು ಮಾಂಟಾನ ರಾಜ್ಯಗಳಿವೆ.  ರಾಜ್ಯಕ್ಕೆ ಈ ಹೆಸರು ಅದರ ಆದಿ ನಿವಾಸಿಗಳಾದ ಡಕೋಟ ಇಂಡಿಯನರಿಂದ ಬಂದಿದೆ.  ಡಕೋಟ ಎಂದರೆ ಸ್ನೇಹಿತ ಎಂದು ಅರ್ಥ.  ಉ.ಅ.  420 29' 30" - 450 56' ಮತ್ತು ಪ. ರೇ.  960 28 33”-104 3ನಡುವೆ ಇರುವ ದಕ್ಷಿಣ ಡಕೋಟದ ಒಟ್ಟು ವಿಸ್ತೀರ್ಣ 77,047 ಚ. ಮೈ. (ನೆಲದ ವಿಸ್ತೀರ್ಣ 75,955 ಚ.ಮೈ).  ಇದರ ಸರಾಸರಿ ಎತ್ತರ ಸಮುದ್ರಮಟ್ಟದಿಂದ 966 ಅಡಿ - 7,242 ಅಡಿ.  ಜನಸಂಖ್ಯೆ 6,66,257. ರಾಜಧಾನಿ ಪಿಯರ್.

	ಮೇಲ್ಮೈಲಕ್ಷಣ :  ಉತ್ತರದಕ್ಷಿಣವಾಗಿ ಸುಮಾರು 225 ಮೈ.  ಅಗಲವಾಗಿಯೂ ಪೂರ್ವಪಶ್ಚಿಮವಾಗಿ ಸುಮಾರು 372 ಮೈ. ಉದ್ದವಾಗಿಯೂ ಇರುವ ದಕ್ಷಿಣ ಡಕೋಟ ರಾಜ್ಯವನ್ನು ಭೌಗೋಳಿಕವಾಗಿ ಎರಡು ವಿಭಾಗಗಳಾಗಿ ವಿಂಗಡಿಸಬಹುದು.  ಪೂರ್ವದ 2/5ರಷ್ಟು ಭಾಗ ಮಿಸಿಸಿಪಿ ನದಿಯ ಬಯಲಿನ ಮಧ್ಯದ ತಗ್ಗುಪ್ರದೇಶದ ಒಂದು ಭಾಗವಾಗಿದೆ, ಉಳಿದ ಭಾಗ ದೊಡ್ಡ ಮೈದಾನ ಪ್ರದೇಶಕ್ಕೆ ಸೇರಿದೆ.  ಈಶಾನ್ಯ ಭಾಗದಲ್ಲಿರುವ ಮಿನ್ನಸೋಟ ಕಣಿವೆಯ ವಿಸ್ತೀರ್ಣ ಸುಮಾರು 700 ಚ.ಮೈ. ದಕ್ಷಿಣ ಡಕೋಟದ ಅತಿ ತಗ್ಗಾದ ಪ್ರದೇಶವೆಂದರೆ ರಾಜ್ಯದ ಪೂರ್ವಗಡಿಯಾಗಿರುವ ಆಳವಾದ ಕಂದರ.  ಮಿನ್ನಸೋಟ ಕಣಿವೆಯ ಪಶ್ಚಿಮಕ್ಕಿರುವ ಪ್ರೇರಿ ಬೆಟ್ಟ ಹಿಮನದೀ ಸಂಚಯನ ಕಾರ್ಯದಿಂದ ಆದ ಒರಟಾದ ಎತ್ತರಪ್ರದೇಶ.  ಇದು ಸಮುದ್ರಮಟ್ಟದಿಂದ ಸು. 1,300-2,000 ಅಡಿ ಎತ್ತರದಲ್ಲಿದೆ.  ಇದರ ತಗ್ಗಾದ ಭಾಗಗಳಲ್ಲಿ ಅನೇಕ ಸರೋವರಗಳಿವೆ.  ಇದರ ಗರಿಷ್ಠ ಅಗಲ ಸುಮರು 70 ಮೈ. ಇದು ಜೇಮ್ಸ್ ನದೀ ಕಣಿವೆಯ ವರೆಗೂ ಪ್ರಸರಿಸಿದೆ.  ಜೇಮ್ಸ್ ನದೀ ಕಣಿವೆಯ ಅಗಲ ಸುಮಾರು 50 ಮೈ. ಇದು ರಾಜ್ಯದ ಪೂರ್ವಾರ್ಧದಲ್ಲಿ ಉತ್ತರದಿಂದ ದಕ್ಷಿಣಕ್ಕೆ ಹರಡಿದೆ.  ಹಿಮನದೀ ಕಾರ್ಯದ ಭೂಸವೆತದ ಲಕ್ಷಣಗಳು ಇಲ್ಲೂ ಕಂಡುಬರುತ್ತವೆ.

	ಪ.ರೇ. 990ಗೆ ಪಶ್ಚಿಮಕ್ಕಿರುವ ಮಹಾಮೈದಾನದಲ್ಲಿ ಮಿಸೂರೀ ಗಿರಿಪಂಕ್ತಿಗಳು ಜೇಮ್ಸ್ ಕಣಿವೆಯಿಂದ ಸುಮಾರು 2,000 ಅಡಿಗಳಷ್ಟು ಎತ್ತರವಾಗಿವೆ.  ಇವು ಜೇಮ್ಸ್ ಮತ್ತು ಮಿಸೂರೀ ನದೀ ಕಣಿವೆಗಳ ಮಧ್ಯಭಾಗದಲ್ಲಿವೆ.  ಮಿಸೂರೀ ನದಿಯ ಪಶ್ಚಿಮಕ್ಕಿರುವ ಮಿಸೂರೀ ಪ್ರಸ್ಥಭೂಮಿ ಸಮುದ್ರಮಟ್ಟದಿಂದ ಸುಮರು 3,400 ಅಡಿ ಎತ್ತರದಲ್ಲಿದೆ.  ಹೆಚ್ಚು ಮರಗಳಿಲ್ಲದ, ತಗ್ಗು ದಿಣ್ಣೆಯಿಂದಾದ ಈ ಉಪ ಶುಷ್ಕ ಭೂಮಿ ಪೂರ್ವದಿಂದ ಪಶ್ಚಿಮಕ್ಕೆ ಹೆಚ್ಚು ಎತ್ತರವಾಗುತ್ತದೆ.  ವೈವಿಧ್ಯಮಯ ಭೂಲಕ್ಷಣಗಳನ್ನು ಹೊಂದಿರುವ ಈ ಪ್ರಸ್ಥಭೂಮಿಯ ನೈಋತ್ಯ ಭಾಗದಲ್ಲಿ ಹ್ವೈಟ್ ಮತ್ತು ಷೈಯಾನ್ ನದಿಗಳ ಕೊರೆತದಿಂದ ನೆಲ ವಿಕೃತಗೊಂಡಿದೆ.  ಇಲ್ಲಿ ಇತಿಹಾಸಪೂರ್ವಕಾಲದ ಅನೇಕ ಪ್ರಾಣಿಗಳ ಅವಶೇಷಗಳು ದೊರೆಯುತ್ತವೆ.

	ರಾಜ್ಯದ ದಕ್ಷಿಣದಲ್ಲಿರುವ ನಬ್ರ್ಯಾಸ್ಕ ಬೆನೆಟ್ ಮತ್ತು ಷ್ಯಾನಾನ್ ಕೌಂಟಿಗಳೊಳಕ್ಕೆ ಸುಮಾರು 12 ಮೈಲಿಗಳಷ್ಟು ಚಾಚಿರುವ ಪ್ರದೇಶ ಸಮುದ್ರ ಮಟ್ಟದಿಂದ 2,400 ಅಡಿಗಳಷ್ಟು ಎತ್ತರವಾಗಿವೆ.  ಸ್ಥಳೀಯವಾಗಿ ಇದಕ್ಕೆ ಸ್ಯಾಂಟ್ ಬೆಟ್ಟಗಳೆಂದು ಹೆಸರಿದೆ.

	ದಕ್ಷಿಣ ಡಕೋಟ ರಾಜ್ಯದ ನೈಋತ್ಯ ಮೂಲೆಯಲ್ಲಿ 50 ಮೈ. ಅಗಲ ಮತ್ತು 100ಮೈ. ಉದ್ದಕ್ಕೆ ಉತ್ತರ-ದಕ್ಷಿಣವಾಗಿ ಹಬ್ಬಿರುವ ಬ್ಲ್ಯಾಕ್‍ಹಿಲ್ಸ್ ಈ ರಾಜ್ಯದ ಉನ್ನತ ಪ್ರದೇಶ.  ಇಲ್ಲಿರುವ ಹಾರ್ನೀ ಶಿಖರದ ಎತ್ತರ 7,242 ಅಡಿ.  ರಾಕೀ ಪರ್ವತ ವ್ಯವಸ್ಥೆಯ ಪೂರ್ವಕ್ಕೆ ಉತ್ತರ ಅಮೆರಿಕದ ಅತ್ಯಂತ ಎತ್ತರವಾದ ಶಿಖರವಿದು.  ಡಕೋಟ ಬ್ಲ್ಯಾಕ್‍ಹಿಲ್‍ಗಳು ಮುಖ್ಯ ಅರಣ್ಯದಿಂದ ಕೂಡಿವೆ.  ಇಲ್ಲಿ ಸುಮಾರು 20 ಲಕ್ಷ ಎಕರೆಗಳಷ್ಟು ರಾಷ್ಟ್ರೀಯ ಅರಣ್ಯ ಪ್ರದೇಶವಿದೆ.  ಖನಿಜ ನಿಕ್ಷೇಪಗಳೂ ಉಂಟು.

	ದಕ್ಷಿಣ ಡಕೋಟದ ಪ್ರಮುಖ ನದಿ ಮಿಸೂರೀ. ಜೇಮ್ಸ್ ವರ್ಮಿಲಿಯನ್ ಮತ್ತು ಬಿಗ್ ಸೂ ಎಂಬ ಉಪನದಿಗಳು ಉತ್ತರದಿಂದ ಹರಿದು ಬಂದು ಮಿಸೂರಿಯ ಪೂರ್ವದಂಡೆಯಲ್ಲಿ ಅದನ್ನು ಸೇರುತ್ತವೆ. ಗ್ರ್ಯಾಂಡ್, ಮೋರೋ, ಷೈಯಾನ್ ಹ್ವೈಟ್-ಇವು ಮಿಸೂರಿಯ ಪಶ್ಚಿಮ ದಂಡೆಯ ಉಪನದಿಗಳು, ರಾಜ್ಯದ ಈಶಾನ್ಯ ಭಾಗದಲ್ಲಿ ಹಿಮನದೀ ಕ್ರಿಯೆಯಿಂದಾದ ಅನೇಕ ಸರೋವರಗಳಿವೆ.

	ವಾಯುಗುಣ : ದಕ್ಷಿಣ ಡಕೋಟವನ್ನು ಹೊಳೆಬಿಸಿಲಿನ ರಾಜ್ಯ ಎಂದು ಕರೆಯುವುದುಂಟು.  ಇಲ್ಲಿ ವರ್ಷದಲ್ಲಿ ಬಹುಸಂಖ್ಯೆಯ ದಿನಗಳಲ್ಲಿ ಹೆಚ್ಚು ಬಿಸಿಲಿರುತ್ತವೆ.  89 ದಿನಗಳಲ್ಲಿ ಮಾತ್ರ ಮೋಡ ಕವಿದಿರುತ್ತದೆ.  ವಾರ್ಷಿಕ ಸರಾಸರಿ ಉಷ್ಣತೆ 45.50ಈ , ಗರಿಷ್ಠ ಉಷ್ಣತೆ 1200 ಈ  ಕನಿಷ್ಠ ಉಷ್ಣತೆ 580ಈ.  ರಾಜ್ಯದ ಆಗ್ನೇಯದಲ್ಲಿ ಹೆಚ್ಚು ಮಳೆ (25). ಉತ್ತರ ಮತ್ತು ಪಶ್ಚಿಮದ ಕಡೆ ಹೋದಂತೆ ಕಡಿಮೆಯಾಗುತ್ತದೆ.  ಕನಿಷ್ಠ ಮಳೆ 14". ಬೇಸಾಯದ ಕಾಲ 136ರಿಂದ 150 ದಿನಗಳ ವರೆಗೆ ವ್ಯತ್ಯಾಸವಾಗುತ್ತದೆ.  ಪೂರ್ವಕ್ಕಿಂತ ಪಶ್ಚಿಮಭಾಗ ಹೆಚ್ಚು ಶುಷ್ಕ.

	ಮಣ್ಣು :  ರಾಜ್ಯದ ಪ್ರಮುಖ ಪ್ರಕೃತಿ ಸಂಪತ್ತೆಂದರೆ ಫಲವತ್ತಾದ ಪ್ರೇರಿ ಮಣ್ಣುಗಳು.  ಪೂರ್ವದ ಹೆಚ್ಚು ಪ್ರದೇಶದಲ್ಲಿ ಫಲವತ್ತಾದ ಕಪ್ಪು ಮಣ್ಣಿದೆ.  ಆದರೆ ಪಶ್ಚಿಮ ಮತ್ತು ವಾಯುವ್ಯ ಭಾಗಗಳಲ್ಲಿ ದಟ್ಟ ಕೆಂಗಂದು ಮಣ್ಣುಂಟು.  ಇದೂ ಫಲವತ್ತಾಗಿದ್ದರೂ ವಾಯುಗುಣ ಅನುಕೂಲವಾಗಿಲ್ಲದ್ದರಿಂದ ಹೆಚ್ಚು ಉಪಯುಕ್ತವಲ್ಲ.

	ಸಸ್ಯ, ಪ್ರಾಣಿವರ್ಗ :  ರಾಜ್ಯದ ಪೂರ್ವಭಾಗದಲ್ಲಿ ವಿವಿಧ ಜಾತಿಯ ಮರಗಳ ಕಾಡುಗಳಿವೆ.  ಮುಖ್ಯ ಮರಗಳು ಎಲ್ಮ್, ಓಕ್, ಕಾಟನ್‍ವೂಡ್, ಹ್ಯಾಕ್‍ಬೆರಿ ಮತ್ತು ಸಿಡಾರ್, ಬ್ಲ್ಯಾಕ್‍ಹಿಲ್ಸ್ ಪ್ರದೇಶದಲ್ಲಿ ಪೈನ್, ಸ್ಟ್ರೂಸ್, ಆಸ್ಪೆನ್, ಹ್ವೈಟ್ ಬರ್ಚ್ ಮತ್ತು ಸಿಡಾರ್ ಮುಖ್ಯವಾದವು.  ರಾಜ್ಯದ ಒಟ್ಟು ಅರಣ್ಯ ಪ್ರದೇಶ 2,500 ಚ.ಮೈ ರಾಜ್ಯದ ಪ್ರಾಣಿಗಳಲ್ಲಿ ಜಿಂಕೆ ಮತ್ತು ಚಿಗರಿಗಳು ಹೆಚ್ಚು.  ಅಲ್ಲದೆ ಕಾಡೆಮ್ಮೆ, ಪ್ರೇರಿ ನಾಯಿ ಮತ್ತು ಜೀವಂಜೀವಗಳು ರಾಜ್ಯದ ಕೆಲವು ಭಾಗಗಳಲ್ಲಿವೆ.
ಖನಿಜ ಸಂಪತ್ತು :  ದಕ್ಷಿಣ ಡಕೋಟದಲ್ಲಿ ಹಲವು ಖನಿಜಗಳ ನಿಕ್ಷೇಪಗಳುಂಟು.  ಚಿನ್ನ ಮತ್ತು ಬೆರಿಲ್ ಉತ್ಪಾದನೆಯಲ್ಲಿ ಅದು ಅಮೆರಿಕ ಸಂಯುಕ್ತ ಸಂಸ್ಥಾನದ ರಾಜ್ಯಗಳ ಪೈಕಿ ಮೊದಲನೆಯ ಸ್ಥಾನ ಪಡೆದಿದೆ.  ದಕ್ಷಿಣ ಡಕೋಟವನ್ನು ಚಿನ್ನದ ನಾಡು ಎಂದು ಕರೆಯಲಾಗಿದೆ.  ಬ್ಲ್ಯಾಕ್ ಹಿಲ್ಸ್ ಪ್ರದೇಶದಲ್ಲಿ ಲೀಡ್ ನಗರದ ಬಳಿಯ ಚಿನ್ನದ ಗಣಿ ಪಶ್ಚಿಮಾರ್ಧಗೋಳದಲ್ಲೇ ಅತ್ಯಂತ ದೊಡ್ಡದು.  ಫೆಲ್‍ಸ್ಪಾರ್ ಉತ್ಪಾದನೆಯಲ್ಲಿ ಈ ರಾಜ್ಯ ಎರಡನೆಯ ಸ್ಥಾನವನ್ನೂ ಲಿಗ್ನೈಟ್ ಉತ್ಪಾದನೆಯಲ್ಲಿ 3 ನೆಯ ಸ್ಥಾನವನ್ನೂ  ಪಡೆದಿದೆ.  ಈ ಖನಿಜಗಳಲ್ಲದೆ ಬೆಳ್ಳಿ, ಅಭ್ರಕ, ಯುರೇನಿಯಮ್‍ಗಳೂ ದೊರೆಯತ್ತಿವೆ.  ಕಟ್ಟಡ ಹಾಗೂ ರಸ್ತೆಗಳ  ನಿರ್ಮಾಣಕ್ಕೆ ಉಪಯುಕ್ತವಾದ ಕ್ವಾರ್ಟ್‍ಜೈóಟ್ ಮತ್ತು ಗ್ರಾನೈಟ್ ವಿಶೇಷವಾಗಿ ದೊರೆಯುತ್ತವೆ.
ಆರ್ಥಿಕತೆ :  ಬೇಸಾಯವೇ ರಾಜ್ಯದ ಆರ್ಥಿಕಾಭಿವೃದ್ಧಿಯ ಬೆನ್ನೆಲುಬು.  ಸುಮಾರು 3/4 ರಷ್ಟು ಜನರಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಬೇಸಾಯವೇ ಆಧಾರ.  ಬೇಸಾಯದಿಂದ ಬರುವ ತಲಾ ವರಮಾನದಲ್ಲಿ ದಕ್ಷಿಣ ಡಕೋಟ ಇತರ ರಾಜ್ಯಗಳಿಗಿಂತ ಮುಂದಿದೆ.  ಆದರೆ ಇದು ವಾಯುಗುಣ ಹಾಗೂ ಮಾರುಕಟ್ಟೆಯ ಏರಿಳಿತಗಳಿಂದ  ವ್ಯತ್ಯಾಸವಾಗುತ್ತದೆ.  ರಾಜ್ಯದ ಸರಾಸರಿ ಹಿಡುವಳಿ 674 ಎಕರೆ (1950).  ಇಲ್ಲಿಯ ಪ್ರಮುಖ ಬೆಳೆಗಳು ಧಾನ್ಯ, ಜೋಳ, ಗೋಧಿ, ಧಾನ್ಯದ ಉತ್ಪಾದನೆಯಲ್ಲಿ ಡಕೋಟ 9 ನೆಯ ರಾಜ್ಯ, ಇದು ಗೋದಿಯ ಬೆಳೆಯಲ್ಲಿ 10 ನೆಯ ಸ್ಥಾನವನ್ನೂ ಮಾಂಸಕ್ಕಾಗಿ ಸಾಕುವ ದನಕರುಗಳಲ್ಲಿ  5 ನೆಯ ಸ್ಥಾನವನ್ನೂ ಕುರಿ ಮತ್ತು ಹಂದಿ ಸಾಕಣೆ ಮತ್ತು ಉಣ್ಣೆ ಉತ್ಪಾದನೆಯಲ್ಲಿ 10 ನೆಯ  ಸ್ಥಾನವನ್ನೂ ಪಡೆದಿದೆ.
 ಕೈಗಾರಿಕಾ ಕ್ಷೇತ್ರದಲ್ಲಿ ಇದು ಹಿಂದುಳಿದಿದೆ. ಇದರದು 44ನೆಯ ಸ್ಥಾನ.  ಇಲ್ಲಿಯ ಮುಖ್ಯ ಕೈಗಾರಿಕೆಗಳೆಂದರೆ ಕೃಷಿಯನ್ನು ಆಧರಿಸಿದಂಥವು.  ಒಟ್ಟು ಕೆಲಸಗಾರರಲ್ಲಿ 2/3 ರಷ್ಟು ಮಂದಿ ಮಾಂಸ ಸಂವೇಷ್ಟನ, ಹೈನುಗಾರಿಕೆ ಮತ್ತು ಕುಕ್ಕುಟ ವಸ್ತು ಉತ್ಪಾದನೆಯಲ್ಲ ನಿರತರಾಗಿದ್ದಾರೆ.  ಮುದ್ರಣ ಮತ್ತು ಪ್ರಕಟಣೆ, ಮರದ ಕೈಗಾರಿಕೆ - ಇವೂ ಉಂಟು.
ಸಾರಿಗೆ ಸಂಪರ್ಕ :  ರಾಜ್ಯದ ಹೆಚ್ಚು ಮಾರ್ಗಗಳು ಪೂರ್ವ - ಪಶ್ಚಿಮವಾಗಿ ಹಬ್ಬಿವೆ.  1881 ರಲ್ಲಿ  ಮೊದಲ ರೈಲುಮಾರ್ಗ ರಾಜ್ಯದ ಮಧ್ಯಭಾಗದವರೆಗೆ ನಿರ್ಮಾಣವಾಯಿತು.  1907 ರಲ್ಲಿ ಅದನ್ನು ಪಶ್ಚಿಮದ ಕಡೆಗೆ ವಿಸ್ತರಿಸಲಾಯಿತು.  ಈಗ ಸುಮಾರು 4,000 ಮೈಲಿಗಳ ರೈಲುಮಾರ್ಗಗಳಿವೆ.  ರಾಜ್ಯದ ಮಧ್ಯಭಾಗದಲ್ಲಿ  ಉತ್ತರದಿಂದ ದಕ್ಷಿಣಕ್ಕೆ ಹರಿಯುವ ಮಿಸೂರೀ ನದಿ  ಪ್ರಮುಖ ಜಲಮಾರ್ಗ.  ಇದಕ್ಕೆ ಅಡ್ಡಲಾಗಿ 5 - 6  ಕಡೆ ಸೇತುವೆಗಳನ್ನು ನಿರ್ಮಿಸಿ, ಪೂರ್ವ ಮತ್ತು ಪಶ್ಚಿಮ ಭಾಗಗಳನ್ನು ಸುಮಾರು 7,000 ಮೈಲಿಗಳ ಹೆದ್ದಾರಿಗಳಿಂದ ಸೇರಿಸಲಾಗಿದೆ.  ಸುಮಾರು 12 ನಗರಗಳು ವಾಯುಮಾರ್ಗ ಸಂಪರ್ಕ ಪಡೆದಿವೆ.  ರಾಜ್ಯದಲ್ಲಿ ಒಟ್ಟು 30 ಕ್ಕಿಂತ ಹೆಚ್ಚು  ವಿಮಾನ ನಿಲ್ದಾಣಗಳಿವೆ.

ಜನ :  ದಕ್ಷಿಣ ಡಕೋಟ ರಾಜ್ಯದ ಜನಸಾಂದ್ರತೆ ಪ್ರತಿ ಚ.ಮೈ.ಗೆ 8.8.  ಇಲ್ಲಿ ಅನೇಕ ಜನಾಂಗಗಳವರು ಇದ್ದಾರೆ.  ಒಟ್ಟು ಜನಸಂಖ್ಯೆಯ ಸೇ.  89.5 ರಷ್ಟು ಮಂದಿ ಸ್ಥಳೀಯ ಬಿಳಿಯರು, ಸೇ.  7 ವಿದೇಶೀ ಬಿಳಿಯರು, ಸೇ.  3.5 ಇಂಡಿಯನರು.  ವಿದೇಶೀ ಬಿಳಿಯರಲ್ಲಿ  ಸ್ಕಾಂಡಿನೇವಿಯನ್, ಜರ್ಮನ್ ಮತ್ತು ರಷ್ಯನ್ ವಲಸೆಗಾರರು ಹೆಚ್ಚು.  ಬಿಳಿಯರಲ್ಲಿ ಪ್ರತಿ 100 ಹೆಂಗಸರಿಗೆ  105 ಗಂಡಸರು  ಇದ್ದಾರೆ.  ಉದ್ಯೊಗನಿರತ ಪುರುಷರಲ್ಲಿ  ಸೇ. 57 ಜನ ಬೇಸಾಯದಲ್ಲೂ ಸೇ. 5 ಜನ ಕೈಗಾರಿಕೆಯಲ್ಲೂ  ಸೇ. 18 ಮಂದಿ ಸಾರಿಗೆ ಸಂಪರ್ಕವ್ಯವಸ್ಥೆಯಲ್ಲೂ ಉಳಿದವರು ಇತರ ವೃತ್ತಿಗಳಲ್ಲೂ  ತೊಡಗಿದ್ದಾರೆ.  ಒಟ್ಟು ಜನಸಂಖ್ಯೆಯ ಸೇ.  60 ಮಂದಿ ಗ್ರಾಮಸ್ಥರು. 

ಪ್ರಮುಖ ಸ್ಥಳಗಳು :  ದಕ್ಷಿಣ ಡಕೋಟದ ರಾಜಧಾನಿ ಪಿಯರ್‍ನ ಜನ ಸಂಖ್ಯೆ 9,699 (1970).  ಇದು ರಾಜ್ಯದ ಧಾನ್ಯ ಮತ್ತು ಹೈನು ಉತ್ಪಾದಕ ಪ್ರದೇಶದ ನಡುವೆ ಇವೆ.  1880 ರಲ್ಲಿ ರೈಲು ಮಾರ್ಗದ ಕೊನೆದಾಣವಾಗಿ ಇದರ ನಿರ್ಮಾಣವಾಯಿತು. ಇದು ರಾಜಧಾನಿಯಾದ್ದು 1889 ರಲ್ಲಿ.  ಮಿಸೂರೀ ನದಿಯ ದಂಡೆಯ ಮೇಲೆ ವರ್ಮಿಲಿಯನ್ ನದಿ ಸಂಗಮಿಸುವ ಎಡೆಯಲ್ಲಿರುವ ವರ್ಮಿಲಿಯನ್ ಪಟ್ಟಣದ ಜನಸಂಖ್ಯೆ 9,128.  ಬ್ರುಕಿಂಗ್ಸ್ (13,717).  ದಕ್ಷಿಣ ಡಕೋಟದ ಪೂರ್ವಭಾಗದಲ್ಲಿ ಜನಪಾತಕ್ಕೆ 53. ಮೈ.  ಉತ್ತರದಲ್ಲಿದೆ.  ದಕ್ಷಿಣ ಡಕೋಟದಲ್ಲಿ ಸುಮಾರು 170 ರಾಜ್ಯ ಮತ್ತು ರಾಷ್ಟ್ರೀಯ ಉದ್ಯಾನವನಗಳ ವಿಹಾರ ಕೇಂದ್ರಗಳೂ ಪ್ರವಾಸಿ ಕೇಂದ್ರಗಳೂ ಇವೆ. ಇವುಗಳಲ್ಲಿ ಮುಖ್ಯವಾದವು ಮೌಂಟ್ ರಸ್ಮೋರ್ ನ್ಯಾಷನಲ್ ಮೆಮೊರಿಯಲ್, ವಿಂಡ್ ಕೇವ್ ನ್ಯಾಷನಲ್ ಪಾರ್ಕ್, ಕಸ್ಟರ್ ಸ್ಟೇಟ್ ಪಾರ್ಕ್ ಮತ್ತು ಬ್ಯಾಡ್‍ಲ್ಯಾಂಡ್ಸ್ ನ್ಯಾಷನಲ್ ಮ್ಯಾನ್ಯಮೆಂಟ್ಸ್.  ಅಸಂಖ್ಯಾತ ಪ್ರವಾಸಿಗರನ್ನು ಆಕರ್ಷಿಸುವ ರಾಜ್ಯದ ಪ್ರಮುಖ ರಾಷ್ಟ್ರೀಯ ಸ್ಮಾರಕವೆಂದರೆ, ರಷ್‍ಮೋರ್, ಬೆಟ್ಟದಲ್ಲಿ ಕೆತ್ತಿರುವ - ಅಮೆರಿಕನ್ ಅಧ್ಯಕ್ಷರಾಗಿದ್ದ ವಾಷಿಂಗ್ಟನ್ ಜಫರ್ಸನ್, ಏಬ್ರಹಾಂ ಲಿಂಕನ್ ಮತ್ತು ರೂಸ್ವೆಲ್ಟರ - ಮುಖಾಕೃತಿ ಶಿಲ್ಪಗಳು.

(ಕೆ.ಆರ್.)

ಇತಿಹಾಸ :  ದಿಬ್ಬಗಳನ್ನು ಕಟ್ಟುತ್ತಿದ್ದ ಅಮೆರಿಕನ್ ಇಂಡಿಯನರು ಇಲ್ಲಿಯ ಮೂಲವಾಸಿಗಳು.   ಅವರು ಜೇಮ್ಸ್ ಮತ್ತು ಬಿಗ್ ಸೂ ನದಿಗಳ ಉದ್ದಕ್ಕೂ ವಾಸಿಸುತ್ತಿದ್ದರು.  ಅಮೆರಿಕನ್ ಇಂಡಿಯನ್ ಬುಡಕಟ್ಟಿಗೆ ಸೇರಿದ ಆರಿಕಾರ ಎಂಬ ಗಣದವರು 17 ನೆಯ ಶತಮಾನದಲ್ಲಿ ಮಿಸೂರೀ ನದಿಯ ಉದ್ದಕ್ಕೂ ಹಳ್ಳಿಗಳನ್ನು ಕಟ್ಟಿ ನೆಲೆನಿಂತು ವ್ಯವಸಾಯ ಮತ್ತು ವ್ಯಾಪಾರಗಳಲ್ಲಿ ತೊಡಗಿದರು.  1750 ರ ಸುಮಾರಿನಲ್ಲಿ ಮಿನ್ನಸೋಟ ಕಾಡು ಪ್ರದೇಶಗಳಿಂದ ಬಂದ ಕ್ಷಾತ್ರಸ್ವಭಾವದ ಸೂ ಇಂಡಿಯನರು ಆರಿಕಾರರನ್ನು ಹೊಡೆದೋಡಿಸಿ ಅವರ ಪ್ರದೇಶಗಳನ್ನು ಆಕ್ರಮಿಸಿಕೊಂಡರು.

ದಕ್ಷಿಣ ಡಕೋಟಕ್ಕೆ ಕಾಲಿಟ್ಟ ಯೂರೋಪಿಯನರಲ್ಲಿ ಮೊದಲಿಗರು ಫ್ರೆಂಚರು.  ಇವರು 1742 - 43 ರಲ್ಲಿ ದಕ್ಷಿಣ ಡಕೋಟದ ಬ್ಲಾಕ್ ಹಿಲ್ಸ್ ಪ್ರದೇಶದಲ್ಲಿ ತಂಗಿದ್ದರು.  ಅಲ್ಲಿಂದ ಮಿಸೂರೀ ನದೀ ಪ್ರದೇಶಕ್ಕೆ ಭೇಟಿ ಇತ್ತು.  ಆ  ಪ್ರದೇಶ ಫ್ರಾನ್ಸಿಗೆ ಸೇರಿದ್ದೆಂದು  ಘೋಷಿಸಿದರು.   ಆದರೆ ಫ್ರಾನ್ಸ್ 1762 ರಲ್ಲಿ ಆ ಪ್ರದೇಶವನ್ನು  ಸ್ಪೇನ್ ಸರ್ಕಾರಕ್ಕೆ  ಬಿಟ್ಟುಕೊಟ್ಟಿತು.  ಸ್ಟೇನಿನ ಆಳ್ವಿಕೆಯ ಕಾಲದಲ್ಲಿ ತುಪ್ಪುಳು ವ್ಯಾಪಾರಿಗಳು ಈ ಪ್ರದೇಶಕ್ಕೆ ಬರಲಾರಂಭಿಸಿದರು.  1800 ರಲ್ಲಿ ದಕ್ಷಿಣ ಡಕೋಟ ಮತ್ತೆ  ಫ್ರಾನ್ಸಿನ ಅಧೀನವಾಯಿತು.  ಆದರೆ ಫ್ರಾನ್ಸಿನ 1 ನೆಯ ನೆಪೋಲಿಯನ್ ದಕ್ಷಿಣ ಡಕೋಟವನ್ನು ಅಮೆರಿಕ ಸಂಯುಕ್ತ ಸಂಸ್ಥಾನಕ್ಕೆ ಮಾರಿದ.

ಅಮೆರಿಕ ಸಂಯುಕ್ತ ಸಂಸ್ಥಾನ ಕೂಡಲೇ ದಕ್ಷಿಣ ಡಕೋಟದ ಬಗ್ಗೆ ಹೆಚ್ಚು ಆಸಕ್ತಿ ತಳೆಯಿತು.  ಈ ಪ್ರದೇಶಕ್ಕೆ ಪರಿಶೋಧಕರನ್ನು ಕಳುಹಿಸಲಾಯಿತು. ಅನಂತರ ಅಮೆರಿಕದ ತುಪ್ಪುಳು ವ್ಯಾಪಾರಿಗಳು ಮಿಸೂರೀ ಮತ್ತು ಅದರ ಉಪನದಿಗಳ ಉದ್ದಕ್ಕೂ ತಮ್ಮ ವ್ಯಾಪಾರ ಪಾಳಯಗಳನ್ನು ಕಟ್ಟಿಕೊಂಡರು. ಮಿಸೂರೀ ನದಿಯ ಮೇಲೆ ಉಗಿ ದೋಣಿಗಳ ಮೂಲಕ ವ್ಯಾಪಾರ ಬೆಳೆಯಿತು. 1830 ಮತ್ತು 1840ರ ವರ್ಷಗಳಲ್ಲಿ ತುಪ್ಪುಳು ವ್ಯಾಪಾರ ಗರಿಷ್ಠ ಮಟ್ಟ ಮುಟ್ಟಿತು. 

1850ರ ದಶಕದಲ್ಲಿ ತುಪ್ಪುಳು ಚರ್ಮ ವ್ಯಾಪಾರ ಇಳಿಮುಖವಾದ ಅನಂತರ ವ್ಯವಸಾಯ ಮತ್ತು ವಸತಿ ಪ್ರದೇಶಗಳನ್ನು ಬಳಸಲು ಗಮನ ನೀಡಲಾಯಿತು. ಮಿನ್ನಸೋಟ ಮತ್ತು ಐಯವದಿಂದ ರೈತರು ಮತ್ತು ಜಮೀನು ವ್ಯಾಪಾರಿಗಳು ಹೊಸ ಹೊಸ ಪ್ರದೇಶಗಳನ್ನು ಅರಸುತ್ತ ಹೊರಟರು.  ಪಟ್ಟಣಗಳು ತಲೆಯೆತ್ತಿದುವು.  1861 ರ ವೇಳೆಗೆ ಡಕೋಟ ರಾಜ್ಯ ಅಸ್ತಿತ್ವಕ್ಕೆ ಬಂತು.  ಮುಂದಿನ  ಹತ್ತು ವರ್ಷಗಳಲ್ಲಿ ಸುಮಾರು ಹನ್ನೆರಡು ಸಹಸ್ರ ಜನರು ವಲಸೆ ಹೋಗಿ ಮೀಸೂರಿ ಮತ್ತು ಅದರ ಉಪನದಿಗಳ ಉದ್ದಕ್ಕೂ ವಸತಿಗಳನ್ನು ಕಟ್ಟಿಕೊಂಡರು.  ಈ ಪಾಳೆಯಗಳು ದಕ್ಷಿಣ ಡಕೋಟದ ಮೊಟ್ಟಮೊದಲನೆಯ ಸ್ಥಿರವಸತಿಗಳು.  ಯಾಂಕ್ಟನ್ ಪಟ್ಟಣ ಡಕೋಟ ಪ್ರದೇಶದ ತಾತ್ಕಾಲಿಕ ರಾಜಧಾನಿಯಾಯಿತು.  ಸೂ ಮತ್ತು ಯಾಂಕ್ಟನ್, ಸೂ  ಪಾಲ್ಸ್, ಮತ್ತು ವಾಟರ್ ಟೌನ್‍ಗಳಿಗೆ ರೈಲುಮಾರ್ಗ ನಿರ್ಮಾಣವಾದ ಅನಂತರ ಜನವಸತಿಗಳು ಹೆಚ್ಚಿದುವು.  ಕ್ರಮೇಣ ಯೂರೋಪಿನ ನಾನಾದೇಶಗಳಿಂದ ಜನರು ವಲಸೆ ಬರಲು ಪ್ರಾರಂಭಿಸಿದರು.  ಡಕೋಟ ಪ್ರದೇಶದಲ್ಲಿ ಬ್ಲಾಕ್ ಹಿಲ್ಸ್ ಪ್ರದೇಶದಲ್ಲಿ ಚಿನ್ನ ದೊರಕಿದ್ದರಿಂದ ಇಲ್ಲಿಗೆ ಬರುವವರ ಸಂಖ್ಯೆ ತುಂಬ ಬೆಳೆಯಿತು. ವಲಸೆ ಬರುವವರನ್ನು ತಡೆಗಟ್ಟಲು ಸ್ಥಳೀಯ ಇಂಡಿಯನರು ಪ್ರಯತ್ನ ನಡೆಸಿದರು.  1876 ರಲ್ಲಿ  ಜನರಲ್ ಜಾರ್ಜ್ ಕಸ್ಟರನ ಸೇನೆಗೂ ಸೂ ಜನರಿಗೂ ಲಿಟ್ಲ್ ಬಿಗ್‍ಹಾರ್ನ್ ಎಂಬಲ್ಲಿ ಕದನ ನಡೆಯಿತು.  1877 ರಲ್ಲಿ ಆದ ಕರಾರಿನ  ಪ್ರಕಾರ ಶಾಂತಿಸ್ಥಾಪನೆಯಾಯಿತಲ್ಲದೆ ಅಮೆರಿಕನ್  ಇಂಡಿಯನರು ಬ್ಲಾಕ್ ಹಿಲ್ಸ್‍ನಿಂದ ಕಾಲ್ತೆಗೆಯಬೇಕಾಯಿತು.

1880 ರ ವೇಳೆಗೆ  ದಕ್ಷಿಣ ಡಕೋಟ ರಾಜ್ಯಕ್ಕೆ ಪ್ರತ್ಯೇಕ ಸ್ಥಾನಮಾನ ಗಳಿಸಿಕೊಳ್ಳಲು ಪ್ರಯತ್ನಗಳು ನಡೆದುವು.  ಆದರೆ ಇದನ್ನು ಅಮೆರಿಕನ್ ಕಾಂಗ್ರೆಸಿನಲ್ಲಿ ಡೆಮೊಕ್ರಾಟರು ವಿರೋಧಿಸಿದರು.  ದಕ್ಷಿಣ ಡಕೋಟ ರಿಪಬ್ಲಿಕನ್ ಉಮೇದುವಾರರನ್ನು ಆರಿಸಬಹುದೆಂಬುದೇ ಈ ವಿರೊಧಕ್ಕೆ ಕಾರಣ.  ಆದರೆ 1888 ರ ರಾಷ್ಟ್ರೀಯ ಚುನಾವಣೆಗಳಲ್ಲಿ ರಿಪಬ್ಲಿಕನರು ಜಯ ಗಳಿಸಿದ್ದರಿಂದ ದಕ್ಷಿಣ ಡಕೋಟಕ್ಕೆ ರಾಜ್ಯದ ಸ್ಥಾನಮಾನಗಳು ದೊರಕುವುದು ಖಚಿತವಾಯಿತು.  1889 ರ ನವೆಂಬರ್ 2 ರಂದು ದಕ್ಷಿಣ ಡಕೋಟವನ್ನು ಅಮೆರಿಕ ಸಂಯುಕ್ತ ಸಂಸ್ಥಾನಗಳ 40 ನೆಯ ರಾಜ್ಯವನ್ನಾಗಿ ಸೇರಿಸಿಕೊಳ್ಳಲಾಯಿತು.  ಪಿಯರ್ ದಕ್ಷಿಣ ಡಕೋಟದ ಖಾಯಂ ರಾಜಧಾನಿಯಾಯಿತು.

ರಾಜ್ಯವಾದ ಮೇಲೆ ದಕ್ಷಿಣ ಡಕೋಟ ಅನೇಕ ತೊಂದರೆಗಳನ್ನು ಅನುಭವಿಸಬೇಕಾಯಿತು.  ಅನಾವೃಷ್ಟಿ ಮತ್ತು ತೀವ್ರ ಚಳಿಯಿಂದಾಗಿ ವ್ಯವಸಾಯ ಕುಂಟಿತವಾಯಿತು.  ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿತು.  ಬೇಸಾಯಗಾರರಲ್ಲಿ ಅತೃಪ್ತಿ ಅಸಮಾಧಾನಗಳು ಉಂಟಾದವು.   ಬೇಸಾಯಗಾರರ ಅಂಸತುಷ್ಟಿ ಪಾಪ್ಯುಲಿಸ್ಟ್ ಚಳವಳಿಗೆ ಎಡೆಮಾಡಿಕೊಟ್ಟಿತು.  ಪಾಪ್ಯುಲಿಸ್ಟ್ ಪಕ್ಷ 1896 ರ ಚುನಾವಣೆಯಲ್ಲಿ ಪ್ರಚಂಡ ಜಯ ಗಳಿಸಿತು.  ದಕ್ಷಿಣ ಡಕೋಟದಲ್ಲಿ ಅಧಿಕಾರಕ್ಕೆ ಬಂದ ಪಾಪ್ಯುಲಿಸ್ಟ್ ಪಕ್ಷ ರೈಲ್ವೆ ಆಡಳಿತ ಮತ್ತು ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸಿತು.

	ಅಲ್ಪಕಾಲದ ಪ್ರಗತಿಯ ಅನಂತರ ದಕ್ಷಿಣ ಡಕೋಟ ಮತ್ತೆ ಪ್ರಕೃತಿಯ ಕೋಪಕ್ಕೆ ತುತ್ತಾಯಿತು.  ರಾಜ್ಯದ ವ್ಯವಸಾಯ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಮತ್ತೆ ಅನರ್ಥಗಳುಂಟಾದವು.  ರಾಜಕೀಯ ರಂಗದಲ್ಲಿ ಪ್ರಗತಿವಾದಿಗಳು ತಮ್ಮ ವರ್ಚಸ್ಸನ್ನು ಬೆಳೆಸಿಕೊಂಡರು.  1916ರಲ್ಲಿ ಪ್ರಗತಿ ಪಕ್ಷದ ಪೀಟರ್ ನಾರ್ಬೆಕ್ ದಕ್ಷಿಣ  ಡಕೋಟದ ಗವರ್ನರ್ ಆಗಿ ಚುನಾಯಿತನಾದ.  ಅವನ ನಾಯಕತ್ವದಲ್ಲಿ ದಕ್ಷಿಣ ಡಕೋಟ ಹಲವಾರು ಸಂವೈಧಾನಿಕ ಸುಧಾರಣೆಗಳಿಗೆ ಒಳಗಾಯಿತು.  ಇಪ್ಪತ್ತನೆಯ ಶತಮಾನದ ಮಧ್ಯಭಾಗದ ವೇಳೆಗೆ ದಕ್ಷಿಣ ಡಕೋಟದ ಜನಜೀವನ ಬಹುಮಟ್ಟಿಗೆ ಸುಧಾರಿಸಿತು.  ಹೆದ್ದಾರಿಗಳ ನಿರ್ಮಾಣಕ್ಕೆ, ಪ್ರೌಢಶಿಕ್ಷಣದ ಪ್ರಗತಿಗೆ, ಸಾಮಾಜಿಕ ಸೌಖ್ಯಕ್ಕೆ ಆದ್ಯತೆ ನೀಡಲಾಗಿದೆ.  ನೀರಾವರಿ ಯೋಜನೆಗಳಿಗೂ ವಿದ್ಯುಚ್ಛಕ್ತಿಯ ಉತ್ಪಾದನೆಗೂ ಗಮನ ನೀಡಲಾಗಿದೆ.  ಬ್ಲಾಕ್ ಹಿಲ್ಸ್ ಪ್ರದೇಶದಲ್ಲಿ ಅಸಂಖ್ಯಾತ ಪ್ರವಾಸಿಗರನ್ನು ಆಕರ್ಷಿಸುವ ಪ್ರಮುಖ ಪ್ರವಾಸಿ ಕೇಂದ್ರಗಳಿವೆ.  ಪ್ರಕೃತಿಯ ಕೋಪಕ್ಕೆ ದಕ್ಷಿಣ ಡಕೋಟ ಆಗಿಂದಾಗ್ಗೆ ತುತ್ತಾಗುತ್ತಿದ್ದರೂ ಸುಧಾರಿತ ಬೇಸಾಯ ಕ್ರಮಗಳನ್ನು ಅನುಸರಿಸಿ ವ್ಯವಸಾಯ ಮತ್ತು ಜಾನುವಾರುಗಳ ಉತ್ಪನ್ನವನ್ನು ಹೆಚ್ಚಿಸಲೂ ಜನತೆಯ ಸರ್ಮತೋಮುಖ ಪ್ರಗತಿಯನ್ನು ಸಾಧಿಸಲೂ ಅಲ್ಲಿಯ ಸರ್ಕಾರ ಶ್ರಮಿಸುತ್ತಿದೆ.
 (ಜಿ.ಎಂ.ಎಸ್.)